ಅಂಬೇಡ್ಕರ್, ಭೀಮರಾವ್, ರಾಮ್‍ಜಿ

 ಡಾಕ್ಟರ್ ಅಂಬೇಡ್‍ಕರ್ ಎಂದು ಪ್ರಸಿದ್ಧರಾಗಿರುವ ಇವರು 1803ನೆಯ ಇಸವಿ ಏಪ್ರಿಲ್ 14ರಂದು ರತ್ನಗಿರಿ ಜಿಲ್ಲೆಯ ಅಂಬಾವಾಡಿ ಎಂಬ ಹಳ್ಳಿಯಲ್ಲಿ ಮಹಾರ್ ಎಂಬ ಹರಿಜನ ಕುಟುಂಬದಲ್ಲಿ ಜನಿಸಿದರು. ಎಳೆತನದಲ್ಲಿ ಇವರನ್ನು ಅಸ್ಪøಶ್ಯನೆಂದು ತಿರಸ್ಕರಿಸಲಾಗುತ್ತಿತ್ತು. ಇವರು 1912ರಲ್ಲಿ ಬಿ.ಎ. ಪದವಿಯನ್ನು ಪಡೆದು, 1913ರಲ್ಲಿ ಅಂದಿನ ಬರೋಡಾ ಮಹಾರಾಜರ ಸಹಾಯದಿಂದ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅಮೆರಿಕದ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ತೆರಳಿದರು. ಅಲ್ಲಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ನೀತಿಶಾಸ್ತ್ರ ಮುಂತಾದುವುಗಳನ್ನು ಅಭ್ಯಸಿಸಿ ಎಂ.ಎ. ಹಾಗೂ ಪಿ.ಎಚ್.ಡಿ. ಪದವಿಗಳನ್ನು ಪಡೆದು 1917ರಲ್ಲಿ ಭಾರತಕ್ಕೆ ಹಿಂತಿರುಗಿದರು. ಕೆಲಕಾಲ ಬೊಂಬಾಯಿನ ಸಿಡನ್‍ಹ್ಯಾಮ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ಪುನಃ ಅಮೆರಿಕಕ್ಕೆ ಪ್ರಯಾಣ ಮಾಡಿ 1920ರಲ್ಲಿ ಅಲ್ಲಿಂದ ಸ್ವದೇಶಕ್ಕೆ ಹಿಂತಿರುಗುವ ಮಾರ್ಗದಲ್ಲಿ ತಾವು ಹಿಂದೆಯೇ ಲಂಡನ್ನಿನಲ್ಲಿ ಪ್ರಾರಂಭಿಸಿದ್ದ ಕಾಯಿದೆ ಮತ್ತು ಅರ್ಥಶಾಸ್ತ್ರದ ಅಭ್ಯಾಸವನ್ನು ಪೂರ್ತಿಗೊಳಿಸಲು ಲಂಡನ್ನಿಗೆ ಹೋದರು. 1922ರಲ್ಲಿ ಬ್ಯಾರಿಸ್ಟರ್ ಪದವಿಯನ್ನು ಪಡೆದು ಅರ್ಥಶಾಸ್ತ್ರದ ಮೇಲಿನ "ರೂಪಾಯಿಯ ಸಮಸ್ಯೆ" ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧವನ್ನು ಬರೆದು 1923ರಲ್ಲಿ ಭಾರತಕ್ಕೆ ಹಿಂತಿರುಗಿದರು. ಈ ಪ್ರಬಂಧಕ್ಕಾಗಿ ಡಿ.ಎಸ್.ಸಿ. ಪದವಿ ದೊರಕಿತು. 1923ರಿಂದ ಬೊಂಬಾಯಿ ಹೈಕೋರ್ಟಿನಲ್ಲಿ ವಕೀಲಿವೃತ್ತಿಯನ್ನು ಕೈಗೊಂಡರು. 1925-28ರವರೆಗೆ ಸ್ಥಳೀಯ ಸಂಸ್ಥೆಯೊಂದರಲ್ಲಿ ವ್ಯಾಪಾರಿ ಕಾಯಿದೆಯ ವ್ಯಾಖ್ಯಾತೃವಾಗಿ ಕೆಲಸ ಮಾಡಿದರು. 1928ರಲ್ಲಿ ಬೊಂಬಾಯಿಯ ವಿಧಾನ ಪರಿಷತ್ತಿನ ಸದಸ್ಯರಾದರು. ಈ ಸಭೆಯಲ್ಲಿ ಅನುವಂಶಿಕೆ ವತನ್‍ದಾರೀ (ಹುದ್ದೆಯ ಕಾಯಿದೆ), ಭೂಕಂದಾಯ, ಪಾನನಿರೋಧ-ಮೊದಲಾದ ವಿಷಯಗಳ ಮೇಲೆ ಇವರು ಮಾಡಿದ ಭಾಷಣಗಳಲ್ಲಿ ಸ್ವಾತಂತ್ರ್ಯಾನಂತರ ನಡೆದ ಎಷ್ಟೋ ಸುಧಾರಣೆಗಳ ಛಾಯೆಯನ್ನು ಕಾಣಬಹುದು. ಸೈಮನ್ ನಿಯೋಗ ನೇಮಕ ಹೊಂದಿದ ಮೇಲೆ ಹಿಂದೂಸ್ಥಾನದ ಹೊಸ ಘಟನೆಯ ಸಂಬಂಧದ ಬೊಂಬಾಯಿ ಪ್ರಾಂತೀಯ ಸಮಿತಿ, ಸಂಯುಕ್ತ ರಾಜ್ಯ ರಚನಾಸಮಿತಿ ಹಾಗೂ ಪೌರತ್ವ ಸಮಿತಿಯ ಸದಸ್ಯರಾಗಿ ಕೆಲಸಮಾಡಿದರು. 1935ರಲ್ಲಿ ಬೊಂಬಾಯಿ ಲಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ಇಷ್ಟರೊಳಗೆ ವಕೀಲಿವೃತ್ತಿಯಲ್ಲಿ ಅಪಾರ ಕೀರ್ತಿಗಳಿಸಿದ್ದರು. ಘಟನಾ ವಿಷಯಿಕ ಕಾಯಿದೆ, ವತನ್ ಇನಾಮ್‍ಗಳ ಸಂಬಂಧಿ ಕಾಯಿದೆ, ಕ್ರಿಮಿನಲ್ ಕಾಯಿದೆಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆಯಲ್ಲಿ ಹೆಸರು ಗಳಿಸಿದ್ದರು. ಬಡವರು ಕೈವಾರಿಯಾಗಿ ಅಂಥವರ ಮೊಕದ್ದಮೆಗಳನ್ನು ಹಣ ಪಡೆಯದೇ ಅತ್ಯಂತ ಶ್ರದ್ಧೆಯಿಂದ ನಡೆಸುತ್ತಿದ್ದರು. ಪ್ರಿನ್ಸಿಪಾಲರಾದ ಮೇಲೆ ಬರೆದ ಮುಂಬೈ ಇಲಾಖೆಯಲ್ಲಿಯ ಕಾಯಿದೆ ಶಿಕ್ಷಣದ ಸುಧಾರಣೆ ವಿಯದ ವಿಚಾರಗಳು-ಎಂಬ ಲೇಖನ ವಕೀಲಿವೃತ್ತಿಯ ಭೇದಗಳನ್ನು ತೊಡೆದುಹಾಕುವ ಬಗೆಗೂ ವಕೀಲಿ ವಿದ್ಯಾಭ್ಯಾಸದ ಕ್ರಮಗಳ ಬಗೆಗೂ ಮನನೀಯ ವಿಚಾರಗಳಿಂದ ತುಂಬಿದೆ. ವಕೀಲರಿಗೆ ಕೇವಲ ಕಾಯಿದೆಯ ಜ್ಞಾನವೊಂದೇ ಸಾಲದು, ಕಾಯಿದೆಯ ಮೂಲತತ್ತ್ವಗಳ ಅಭ್ಯಾಸದೊಡನೆ ಕಾಯಿದೆಗೆ ಅನುಷಂಗಿಕವಾದ ಸಮಾಜಶಾಸ್ತ್ರ ನೀತಿಶಾಸ್ತ್ರ ಮೊದಲಾದ ವಿಷಯಗಳ ಅಭ್ಯಾಸವೂ ಬೇಕು; ವಕೀಲಿ ವಿದ್ಯಾಭ್ಯಾಸದಲ್ಲಿ ವಿಷಯನಿರೂಪಣಾ ಸಾಮಥ್ರ್ಯ, ತತ್ತ್ವಪ್ರತಿಪಾದನೆಗಳನ್ನು ಬೆಳೆಸುವ ಶಿಕ್ಷಣವೂ ಬೇಕು; ಅಲ್ಲದೆ ಆ ಶಿಕ್ಷಣ ನ್ಯಾಯಶಾಸ್ತ್ರೀಯ ಮನೋವೃತ್ತಿಯನ್ನು ರೂಪಿಸುವಂತಾಗಬೇಕು-ಇದೇ ಮೊದಲಾದ ಹೊಸ ಕಾಯಿದೆ ಶಿಕ್ಷಣತತ್ತ್ವಗಳನ್ನು ಮೂಡಿಸಿದರು. ಅಗಾಧ ಪಂಡಿತರೂ ಗ್ರಂಥಭಂಡಾರಪ್ರಿಯರೂ ಆದ ಅಂಬೇಡ್‍ಕರರ ಕಾಲದಲ್ಲಿ ಸರಕಾರಿ ಲಾ ಕಾಲೇಜಿನ ಪುಸ್ತಕಭಂಡಾರ ಅತ್ಯಂತ ಸಮೃದ್ಧಸ್ಥಿತಿಗೇರಿತು. 1937ರಲ್ಲಿ ಇವರು ಬೊಂಬಾಯಿ ಶಾಸನಸಭೆಯ ಸದಸ್ಯರಾಗಿ ಆಯ್ಕೆಯಾದರು. 1938ನೆಯ ಮೇ ತಿಂಗಳಿನಲ್ಲಿ ಸರಕಾರಿ ಕಾಲೇಜಿನ ಪ್ರಿನ್ಸಿಪಾಲ್ ಸ್ಥಾನಕ್ಕೆ ರಾಜೀನಾಮೆಯಿತ್ತರು. 1940ರಲ್ಲಿ ರಾಷ್ಟ್ರವಿಭಜನೆಯನ್ನು ಕುರಿತ `ಥಾಟ್ಸ್ ಆನ್ ಪಾರ್ಟಿಷನ್' ಎಂಬ ಪುಸ್ತಕವನ್ನು ಪ್ರಕಟಿಸಿದರು. ಭಾರತದ ವಿಭಜನೆಯನ್ನು ಪ್ರಸ್ತಾಪಿಸಿ ಟರ್ಕಿ ಗ್ರೀಸ್ ಬಲ್ಗೇರಿಯಾ ಮೊದಲಾದ ಪ್ರಸಿದ್ಧ ಅಂತರರಾಷ್ಟ್ರೀಯ ಕಾಯಿದೆಗಳಲ್ಲಿನ ಪೂರ್ವೋದಾಹರಣೆಗಳನ್ನು ಕೊಟ್ಟು ಕಟಿಸಿದರು. ಭಾರತದ ವಿಭಜನೆಯನ್ನು ಪ್ರಸ್ತಾಪಿಸಿ ಟರ್ಕಿ ಗ್ರೀಸ್ ಬಲ್ಗೇರಿಯಾ ಮೊದಲಾದ ಪ್ರಸಿದ್ಧ ಅಂತರರಾಷ್ಟ್ರೀಯ ಕಾಯಿದೆಗಳಲ್ಲಿನ ಪೂರ್ವೋದಾಹರಣೆಗಳನ್ನು ಕೊಟ್ಟು ವಿಭಜನೆಯ ಕಾಲಕ್ಕೆ ಪಾಕಿಸ್ತಾನ ಹಾಗೂ ಹಿಂದೂಸ್ಥಾನದ ಹಿಂದೂ ಮುಸ್ಲಿಮರನ್ನು ಕಾಯಿದೆ ರೀತ್ಯ ಸ್ಥಳಾಂತರಿಸುವ ವ್ಯವಸ್ಥೆ ಮಾಡಬಾರದೆಂದು ಸೂಚಿಸಿದರು. 1942 ಜೂನ್ ತಿಂಗಳಲ್ಲಿ ವೈಸ್‍ರಾಯರ ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರಾಗಿ ನೇಮಕಗೊಂಡರು. ಅಲ್ಲಿ ಕಾರ್ಮಿಕಶಾಖೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದರು. ಈ ಮಂಡಲಿ 1946ರ ಜೂನ್ ತಿಂಗಳಲ್ಲಿ ವಿಸರ್ಜನೆ ಹೊಂದಿದ ಮೇಲೆ ಮುಂಬೈಗೆ ವಾಪಸಾಗಿ ಅದೇ ವರ್ಷ ಸಿದ್ಥಾರ್ಥ ಕಾಲೇಜನ್ನು ಸ್ಥಾಪಿಸಿದರು. 1946ರಲ್ಲಿ ಘಟನಾವಿಧಾಯಕ ಸಭೆಯ ಸದಸ್ಯರಾಗಿ ಆಯ್ಕೆಯಾದರು. 1947ರಲ್ಲಿ ಭಾರತದ ಸ್ವಾತಂತ್ರ್ಯ ಕಾಯಿದೆ ಅಂಗೀಕೃತವಾಗಿ ಘಟನಾವಿಧಾಯಕ ಸಭೆಗೆ ಸಾರ್ವಭೌಮತ್ವವು ಲಭಿಸಿತು. ಅನಂತರ ಇವರನ್ನು ಕಾನೂನು ಮಂತ್ರಿಗಳಾಗಿಯೂ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು. ಸಂವಿಧಾನ ರಚನೆಯ ಕಾರ್ಯನಿರ್ವಹಣೆಯನ್ನು ವಿಶೇಷವಾಗಿ ಇವರೊಬ್ಬರೇ ವಹಿಸಿ ಸುವ್ಯವಸ್ಥಿತ ರೀತಿಯಿಂದ ನೆರವೇರಿಸಿದರೆಂದು ಸಂವಿಧಾನ ಸಮಿತಿಯ ಸದಸ್ಯರೇ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಇವರ ಧ್ಯೇಯವಾದ ಪ್ರಜಾಸತ್ತಾತ್ಮಕ ಸಮಾಜವಾದ ತತ್ತ್ವಗಳು. ಮೂಲಭೂತ ಹಕ್ಕುಗಳು (ಸಮತ್ವ, ವಾಕ್‍ಸ್ವಾತಂತ್ರ್ಯ-ಮೊದಲಾದವುಗಳು), ಎಂದಿಗೂ ಅಬಾಧಿತವಾಗಿ ಉಳಿಯುವಂತೆ ಕಾಯಿದೆಯಿಂದ ಸ್ಥಿರಪಡಿಸಬೇಕಾದ ವಿಚಾರ-ಇವುಗಳು ಇವರ ಧ್ಯೇಯವಾಗಿದ್ದು ಇವನ್ನು ಘಟನೆಯಲ್ಲಿ ಸ್ಫುಟವಾಗಿ ಎತ್ತಿ ತೋರಿಸಲಾಗಿದೆ, ಹಿಂದೂ ಕಾಯಿದೆಯ ಕ್ರೋಡೀಕರಣ ಜನತಾ ಪ್ರಾತಿನಿಧಿಕ ಕಾಯಿದೆಯ ಸುಧಾರಣೆ-ಇವು ಇವರು ಅನಂತರ ಎತ್ತಿಕೊಂಡ ಮುಖ್ಯ ಕಾಯಿದೆಯ ಮಸೂದೆಗಳು. ಹಿಂದೂ ಕಾಯಿದೆಯ ಕ್ರೋಡೀಕರಣದ ವಿಷಯದಲ್ಲಿ, ಅದು ಸಿಖ್ ಬೌದ್ಧ ಜೈನರಿಗೂ ಅನ್ವಯಿಸಬೇಕೆಂಬುದನ್ನು ಇವರು ಬಲವಾಗಿ ಸಮರ್ಥಿಸಿದರು. ಮುಂದೆ ಕ್ರೋಡೀಕರಣ ಕಾಯಿದೆಗೆ ಮಂತ್ರಿಮಂಡಲದಲ್ಲಿ ಮತ್ತು ದೇಶದಲ್ಲಿ ಬಲವಾದ ವಿರೋಧವೆದ್ದಿತು. ಅದರೊಳಗಿನ ವಿವಾಹ ವಿಚ್ಛೇಧನ, ಸ್ತ್ರೀಯರಿಗೆ ದೊರಕುವ ವಾರಸಾಹಕ್ಕು ಮೊದಲಾದುವುಗಳನ್ನು ಕೌಟಿಲ್ಯ, ಬೃಹಸ್ಪತಿ, ಜೀಮೂತವಾಹನಾದಿಗಳ ಗ್ರಂಥಗಳ ಆಧಾರದ ಮೇಲೆ ಇವರು ಸಮರ್ಥಿಸಿದರು. ಆದರೂ ಪ್ರಬಲವಾದ ವಿರೋಧಕ್ಕೆ ತಲೆಬಾಗಿ ಸರಕಾರವೂ ಕೇವಲ ವಿವಾಹ ಮತ್ತು ತದ್ವಿಚ್ಛೇದ ಭಾಗವನ್ನು ಎತ್ತಿಕೊಳ್ಳಲು ನಿರ್ಣಯಿಸಿತು. ಮುಂದೆ ಅದೂ ಅಂಗೀಕೃತವಾಗುವುದು ಸಾಧ್ಯವಾಗದಿರಲು ಇವರು 1951ನೆಯ ಅಕ್ಟೋಬರ್‍ನಲ್ಲಿ ಮಂತ್ರಿಪದವಿಗೆ ರಾಜೀನಾಮೆಯನ್ನಿತ್ತು ಸುಪ್ರೀಮ್ ಕೋರ್ಟಿನಲ್ಲಿ ವಕೀಲಿ ವೃತ್ತಿಯನ್ನು ಕೈಕೊಂಡರು. ಹಿಂದೂ ಸಮಾಜದಲ್ಲಿ ಹರಿಜನರ ಏಳಿಗೆಗೋಸ್ಕರ ಅಧಿಕವಾಗಿ ಶ್ರಮಿಸಿ, ತಾವು ನಿರೀಕ್ಷಿಸಿದಷ್ಟು ಹರಿಜನರ ಉದ್ಧಾರಕಾರ್ಯ ನಡೆಯಲಿಲ್ಲವಾಗಿ 1956ನೆಯ ಇಸವಿ ಅಕ್ಟೋಬರ್ ತಿಂಗಳಲ್ಲಿ 2 ಲಕ್ಷ ಹರಿಜನರೊಂದಿಗೆ ಬೌದ್ಧಮತವನ್ನು ಸ್ವೀಕರಿಸಿದರು. ಅದೇ ವರ್ಷ ಡಿಸೆಂಬರ್‍ನಲ್ಲಿ ಕಾಲವಾದರು. ಇವರ ಅಗಾಧ ಕಾಯಿದೆ ಪಾಂಡಿತ್ಯ, ನವ್ಯ ನ್ಯಾಯತತ್ತ್ವಗಳ ಪ್ರತಿಪಾದನೆಗಳು, ಹೊಸಬಗೆಯ ಸಮಾಜ ಸಂಘಟನಾ ವಿಚಾರಗಳು ಇವರಿಗೆ ಜನತೆಯಿಂದ ಅಭಿನವಮನು ಎಂಬ ಗೌರವಾಭಿದಾನವನ್ನು ದೊರಕಿಸಿ ಕೊಟ್ಟುವು.

 

(ವಿ.ಆರ್.ಬಿ.; ಎ.ಎಂ.)